ತಾಯಿ(ಅಮ್ಮ) ಎನ್ನುವುದೊಂದು ಅಭೂತಪೂರ್ವ ಶಕ್ತಿ

ಪ್ರತಿ ವರ್ಷ ಮೇ ತಿಂಗಳಿನ ಎರಡನೆಯ ಭಾನುವಾರ ಅಂತರಾಷ್ಟ್ರೀಯ ತಾಯಂದಿರ ದಿನವಂತೆ.ಅವತ್ತು ಎಲ್ಲರೂ ಅವರವರ ತಾಯಿಗೆ ಶುಭಾಶಯಗಳನ್ನು ತಿಳಿಸಿ,ನೆನಪಿನ ಕಾಣಿಕೆಗಳನ್ನು ನೀಡಿ ಖುಷಿಪಡಿಸಬೇಕಂತೆ.
ಎಷ್ಟು ವಿಚಿತ್ರ ಅಲ್ವಾ⁉️

ತಾಯಿಯನ್ನು ಖುಷಿಯಾಗಿ ನೋಡಿಕೊಳ್ಳಲು ತಾಯಂದಿರ ದಿನವೇ ಆಗಬೇಕೇ❓
ಒಂದು ನಿಮಿಷ ಎಲ್ಲರೂ ನಿಮ್ಮ ಮನದಾಳಕ್ಕೆ ಇಳಿದು ಯೋಚಿಸಿ ನೋಡಿ.
ನಿಮ್ಮ ತಾಯಿ ಯಾವತ್ತಾದರೂ ನಿಮ್ಮ ಹುಟ್ಟು ಹಬ್ಬದ ದಿನ ಮಾತ್ರ ನಿಮ್ಮನ್ನು ಹೆಚ್ಚು ಖುಷಿಯಾಗಿ ನೋಡಿಕೊಳ್ಳುತ್ತಾಳೆಯೇ❓ ಇಲ್ಲ.ಹಾಗೆ ಮಾಡಲು ಸಾಧ್ಯವೇ ಇಲ್ಲ. ನಿಮ್ಮ ತಾಯಿಯ ಋಣವನ್ನು ಈ ಜನ್ಮದಲ್ಲಿ ನಿಮ್ಮಿಂದ ತೀರಿಸಲು ಸಾಧ್ಯವೇ❓ಅಂತಹ ಮಹಾಶಯರು ಯಾರಾದರೂ ಇದ್ದರೆ ಈ ಜಗದಲ್ಲಿ ನಿಮಗಿಂತ ಶ್ರೇಷ್ಠರು ಮತ್ತೊಬ್ಬರಿಲ್ಲ.

ಯಾವುದೇ ನಿರೀಕ್ಷೆಗಳಿಲ್ಲದೇ ಅವಳು ಮಕ್ಕಳಿಗೆ ಜನ್ಮ ಕೊಡುತ್ತಾಳೆ.ತನ್ನ ಸಾವಿನ ದಿನಗಳವರೆಗೂ ಅವಳು ಮಕ್ಕಳಿಂದ ಏನನ್ನೂ ಬಯಸುವುದಿಲ್ಲ.ಅಮ್ಮನಿಗಿಂತ ಮತ್ತ್ಯಾರೂ ಗ್ರೇಟ್ ಇಲ್ಲ ರೀ.ನಿಮ್ಮನ್ನು ಬೆಳೆಸಲು ಅವಳು ಪಟ್ಟ ಪಾಡು ಅಷ್ಟಿಷ್ಟಲ್ಲ.ಜೀವನದ ಪ್ರತಿ ಹಂತದಲ್ಲೂ ಅವಳು ತನ್ನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ.ಯಾವುದೇ ಕ್ಷಣದಲ್ಲೂ ಮಕ್ಕಳಿಗೆ ತೊಂದರೆಯಾಗದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಳಜಿ ವಹಿಸುತ್ತಾಳೆ.ತಾಯಿಯಾದವಳು ಅಪ್ಪನ ಜೊತೆ ಸೇರಿ ಊಟ,ಬಟ್ಟೆ,ಶಿಕ್ಷಣ ಇತ್ಯಾದಿ ಮೂಲಭೂತ ಅವಶ್ಯಕತೆಗಳನ್ನು ನೀಡಿ,ತನ್ನ ಒಡಲ ಪಾತ್ರೆಯಲ್ಲಿರುವ ಪ್ರೀತಿಯನ್ನು ಮಕ್ಕಳಿಗೆ ಸಂಪೂರ್ಣವಾಗಿ ಧಾರೆ ಎರೆಯುತ್ತಾಳೆ.ತಾಯಿಯ ದೂರಾಲೋಚನೆ ಎಷ್ಟಿರುತ್ತದೆ ಎಂದರೆ,ತಾನು ಸತ್ತ ಮೇಲೆಯೂ ಕೂಡ ತನ್ನ ಮಕ್ಕಳಿಗೆ ಪ್ರೀತಿಯ ಕೊರತೆಯಾಗಬಾರದೆಂದು ಹೆಂಡತಿಯ ರೂಪದಲ್ಲಿ ಕಾಳಜಿ ವಹಿಸುವ ಒಂದು ಜೀವವನ್ನು ಜೊತೆ ಮಾಡುತ್ತಾಳೆ.ಅದಕ್ಕೆ ಏನೋ ನಾವೆಲ್ಲ ಇಂದು ಹೆಂಡತಿಯನ್ನು ಎರಡನೆಯ ತಾಯಿ ಎಂದು ಕರೆಯುವುದುಂಟು.
ಅದ್ಯಾಕೋ ಗೊತ್ತಿಲ್ಲ,ಇತ್ತೀಚೆಗೆ ಆಧುನಿಕತೆಯ ಜೀವನ ಶೈಲಿಗೆ ಮಾರುಹೋದ ಬಹುತೇಕ ಯುವಕರು ಮದುವೆಯಾಗುವುದಷ್ಟೇ ತಡ,ತಾಯಿಯ ಮೇಲಿದ್ದ ಪ್ರೀತಿಯನ್ನು ಕ್ಷಣಮಾತ್ರದಲ್ಲಿ ಮರೆಯುತ್ತಾರೆ.My Mother is God,My Mother is Great,Mom’s love
ಅಂತೆಲ್ಲ ಹೇಳಿಕೊಂಡು ಊರೆಲ್ಲಾ ಸುತ್ತಿ ಬರುತ್ತಿದ್ದವರು ಹೆಂಡತಿ ಬಂದ ಮೇಲೆ My Wife is my Life ಅಂತ ಬದಲಾಗಿ ಬಿಡುತ್ತಾರೆ.
ಇಲ್ಲಿ ಹೆಂಡತಿಯು ಜೀವನದ ಒಂದು ಭಾಗವಾಗಿರಲಿ.ಆದರೆ ತಾಯಿಯ ಋಣವನ್ನು ಮರೆತು ಹೆಂಡತಿಯೇ ಜೀವನ ಎನ್ನುವುದು ತಪ್ಪು.
ಕಂಕುಳಲ್ಲಿ ಎತ್ತಿಕೊಂಡು ನಿಮ್ಮ ತಾಯಿ ಊರು ತಿರುಗಿದ್ದನ್ನು,ನೀವು ಅತ್ತಾಗ ಅತ್ತು ನಕ್ಕಾಗ ನಕ್ಕು ಹಗಲಿರುಳೆನ್ನದೆ ನಿಮಗಾಗಿ ಪ್ರತಿಕ್ಷಣ ಜೀವನವನ್ನು ಸವೆಸಿದ್ದನ್ನು ಒಂದು ಸಲ ನೆನಪಿಸಿಕೊಳ್ಳಿ.ನೀವು ಮಲ,ಮೂತ್ರ,ಎಂಜಲು ಏನೆಲ್ಲಾ ಹೊಲಸು ಮಾಡಿದರೂ,
ಅಸಹ್ಯಪಟ್ಟುಕೊಳ್ಳಲಾರದೆ ತನ್ನ ಸೀರೆಯ ಸೆರಗಿನಿಂದ ಒರೆಸಿ ಸ್ವಚ್ಛ ಮಾಡಿದ್ದನ್ನು ಕಣ್ಮುಂದೆ ತಂದುಕೊಳ್ಳಿ.ಮನೆಯಿಂದ ಹೊರಗೆ ಹೋದಾಗ ನೀವು ರಾತ್ರಿ ವಾಪಸ್ ಮನೆಗೆ ಬರುವವರೆಗೂ ಕಾಯ್ದು ಕುಳಿತ ಆ ಶಬರಿಯನ್ನು ಸ್ಮರಿಸಿಕೊಳ್ಳಿ.ನಿಮಗಾಗಿ ಅದೆಷ್ಟು ಶಿವರಾತ್ರಿಯ ಜಾಗರಣೆಗಳನ್ನು ಮಾಡಿದ್ದಾಳೋ❓
ಅವಳಿಗೆನೇ ಗೊತ್ತು.ಮಕ್ಕಳು ಚೆನ್ನಾಗಿ ತಿನ್ನಲಿ ಚೆನ್ನಾಗಿ ಬೆಳೆಯಲಿ ಎಂದು ಸಮಯಕ್ಕೆ ಸರಿಯಾಗಿ ಬಿಸಿ-ಬಿಸಿ ಅಡುಗೆ ಮಾಡಿ ನಿಮಗೆ ಬಡಿಸಿ ಉಣಿಸಿದ ಪರಿಯನ್ನೂ,ಒಂದೇ ಒಂದು ಉಂಡೆ ಇದ್ದಾಗ ಬೇರೆ ಅವರ ಕಣ್ ತಪ್ಪಿಸಿ ನಿಮಗೆ ಕೊಟ್ಟಿದ್ದನ್ನು,ತಂದೆಯ ಕಣ್ಣಿಗೆ ಕಾಣಲಾರದಂಗೆ ಕೈಯಲ್ಲಿ ಮುಚ್ಚಿ ಕಾಸು ಕೊಟ್ಟಿದ್ದನ್ನು ಮತ್ತೊಮ್ಮೆ ಮೆಲಕು ಹಾಕಿ.

ಹೀಗೆ ಒಂದೇ….ಎರಡೇ….ತಾಯಿ ಮಾಡಿದ ಕೆಲಸಗಳು ವರ್ಣನಾತೀತ.
ಅಸಂಖ್ಯ ಕೂಡ.ಆವಾಗಲೂ ಕೂಡ ನಿಮ್ಮ ತಾಯಿ ನಿಮ್ಮಿಂದ ಏನನ್ನೂ ಬಯಸಿಲ್ಲ.ಈಗಲೂ ಕೂಡ ಏನನ್ನೂ ಬಯಸುವುದಿಲ್ಲ.ಒಂದೇ ಒಂದು ಅವಳು ಬಯಸುವುದೆಂದರೆ ನಿಮ್ಮ ಸುಖ.ನಿಮ್ಮ ಹಿತ ಅಷ್ಟೇ.ಆದರೆ ನೀವೇ ತಾಯಿಯ ಮನಸ್ಸನ್ನು ಅರ್ಥ ಮಾಡಿಕೊಂಡು ಅವಳಿಗೆ ನೋವಾಗದಂತೆ ನೋಡಿಕೊಳ್ಳಿ.ನೀವು ಅತ್ಯುನ್ನತ ಸ್ಥಾನಕ್ಕೇರಿ ಕೋಟ್ಯಾಧೀಶನಾಗಿ ಬಾಳು ಸಾಗಿಸಿ.ಪರವಾಗಿಲ್ಲ.ಆದರೆ ತಾಯಿಯ ಜೊತೆ ನಾಲ್ಕು ಮಾತು ಕೂಡ ಆಡದೆ ಇರುವಷ್ಟು ಬ್ಯುಸಿ ಆಗಬೇಡಿ.ಅನ್ನದ ತುತ್ತು ಬಾಯಿಗೆ ಇಡುವಾಗ-ಅವ್ವಾ,ಊಟ ಮಾಡಿಯಾ?
ಅಂತ ಕೇಳಲು ಮರೆಯುವಷ್ಟು ಬೆಳೆಯಬೇಡಿ.ಹೆಂಡತಿಯ ಪ್ರೀತಿಗೂ ತಾಯಿಯ ಪ್ರೀತಿಗೂ ಹೋಲಿಕೆ ಮಾಡುವುದು ಅತಿಶಯೋಕ್ತಿ ಅನಿಸುತ್ತದೆ.ಇಬ್ಬರದು ಪ್ರೀತಿಯೇ ಆಗಿದ್ದರೂ ಕೂಡ ಪ್ರೀತಿ ತನ್ನ ಹಕ್ಕು ಅಂತ ಗೊತ್ತಿದ್ದರೂ ಮೌನವಾಗಿರುವ ಜೀವ ಒಂದು ಕಡೆ ಆದರೆ,ನನಗೆ ಪ್ರೀತಿ ತೋರಿಸಲೇಬೇಕು ಅಂತ ಹಠ ಮಾಡಿ ಕೇಳಿ ಪಡೆಯುವ ಜೀವ ಮತ್ತೊಂದು ಕಡೆ.ಇಲ್ಲಿ ಇಬ್ಬರಿಗೂ ಪ್ರೀತಿ ತೋರಿಸಿ,ಎರಡು ಜೀವಗಳನ್ನು ಸಮಾಧಾನಪಡಿಸುವುದೇ ಗಂಡಿನ ಜಾಣತನ.

10 ರಿಂದ 15 ಲಕ್ಷ ಕೊಟ್ಟು ಕಾರನ್ನು ಕೊಂಡುಕೊಳ್ಳುವ ಅದೆಷ್ಟು ಜನ ನಿಮ್ಮ ತಾಯಿಯನ್ನು ಕರೆದುಕೊಂಡು ಪ್ರವಾಸ ಮಾಡಿದ್ದೀರಾ❓ವಯಸ್ಸಾಗಿದೆ,ಆರೋಗ್ಯ ಸಮಸ್ಯೆ ಬಿಟ್ರೆ ಅವಳು ಹಳೇ ಕಾಲದವಳು ಅಂತ ಹೇಳುವ ನೆಪಗಳೇ ಜಾಸ್ತಿ.ಮತ್ತ್ಯಾಕೆ ಕಾರ್ ಮೇಲೆ Mother is God ಅಂತ ಬರಸ್ತೀರಾ❓
ಅದು ಕೂಡ ಒಂದು ಶೋಕಿನಾ❓
ಕಾರ್ ಮೇಲೆ ಒಂದು ಸಣ್ಣ ಗೆರೆ ಬಿದ್ದರೂ ಕೂಡ,ಅದನ್ನು ಕೂಡಲೇ ಶೋರೂಂಗೆ ತೆಗೆದುಕೊಂಡು ಹೋಗಿ ಸರಿ ಮಾಡಿಸುವ ಜನಕ್ಕೆ ತಾಯಿಯ ಮನಸ್ಸಿನಲ್ಲಿ ಆಗಿರುವ ಗಾಯಕ್ಕೆ ಮುಲಾಮು ಹಚ್ಚುವ ಯೋಗ್ಯತೆ ಇಲ್ಲವೇ?ನಿಮ್ಮ ತಾಯಿ ನೀವು ಚಿಕ್ಕವರಿದ್ದಾಗ ನಿಮಗೆ ಸಿನಿಮಾ,ಪಾರ್ಕು,ಹಳ್ಳ,ನದಿ, ತೋಟ,ಜಾತ್ರೆ ಅಂತ ಎಷ್ಟೆಲ್ಲ ತೋರಿಸಿಲ್ಲ.ಆದರೆ ಈಗ ನೀವು ಅವಳಿಗೆ ಎಷ್ಟು ಸಿನಿಮಾ ತೋರಿಸಿದ್ದೀರಾ❓
ಎಷ್ಟು ಜಾತ್ರೆ ತೋರಿಸಿದ್ದೀರಾ❓ಒಂದು ಸಲ ಲೆಕ್ಕ ಹಾಕಿ.ಶ್ರೀಮಂತ ಹುದ್ದೆಯಿಂದ ಗಳಿಸಿದ ದುಡ್ಡಿನಲ್ಲಿ ಒಂದು ಕೋಟಿ ಕೊಟ್ಟು ನಾಲ್ಕೈದು ಕೋಣೆಗಳಿರುವ ಮನೆಯನ್ನು ತೆಗೆದುಕೊಳ್ಳುವ ನೀವು,ಅದೆಷ್ಟು ಜನ ಪಡಸಾಲೆ(ಹಾಲ್)ನಲ್ಲಿ ಕುಳಿತು ತಾಯಿಯೊಂದಿಗೆ ಮಾತನಾಡುತ್ತೀರಾ❓
ಮನೆಯಲ್ಲಿ ಕೋಣೆಗಳು ಹೆಚ್ಚಾದ ಮೇಲೇನೇ ಬಾಂಧವ್ಯ,ಪ್ರೀತಿ ಕಡಿಮೆಯಾಗಿದ್ದು.ಮನಸುಗಳ ಮಧ್ಯೆ ಗೋಡೆಯನ್ನು ಕಟ್ಟಿದ್ದು ಈ ಆಧುನಿಕತೆ ಎಂದರೆ ತಪ್ಪಾಗಲಾರದು.

Mother’s Day ಬಂದಾಕ್ಷಣ ತಾಯಿಯೊಂದಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಂಡು ಫೋನಿನಲ್ಲಿ ಸ್ಟೇಟಸ್ ಹಾಕಿಕೊಂಡು Love You Maa,Mother is Great
ಅಂತ ಹೇಳುವ ಬದಲು,ಅದೆಷ್ಟೇ ಕಾರ್ಯದ ಒತ್ತಡವಿದ್ದರೂ ಕೂಡ ನಿಮ್ಮ ತಾಯಿಗೋಸ್ಕರ ಪ್ರತಿದಿನ ಹತ್ತು ನಿಮಿಷವಾದರೂ ಬಿಡುವು ಮಾಡಿಕೊಳ್ಳಿ.ಜೊತೆಯಾಗಿ ಊಟ ಮಾಡಿ,ಮನಸು ಬಿಚ್ಚಿ ಮಾತನಾಡಿ.ನಗಿಸಿ ನಗುವುದನ್ನು ರೂಢಿಸಿಕೊಳ್ಳಿ. ಅಜ್ಜಿ-ಮೊಮ್ಮಕ್ಕಳ ಬಾಂಧವ್ಯವನ್ನು ಇಮ್ಮಡಿಗೊಳಿಸಿ.ನೀವೇನೇ ನಿರ್ಧಾರಗಳನ್ನು ತೆಗೆದುಕೊಂಡರೂ ಕೂಡ ಅವಳಿಗೂ ತಿಳಿಸಿ.ಅವಳು ಯಾವುದಕ್ಕೂ ಬೇಡ ಅನ್ನುವುದಿಲ್ಲ.ನನ್ನ ಮಗ ನನಗೆ ಮಹತ್ವ ಕೊಡ್ತಾನೆ ಅಂತ ಖುಷಿಯಾಗ್ತಾಳೆ.ಮಕ್ಕಳೇ ಅವಳಿಗೆ ದೊಡ್ಡ ಗಿಫ್ಟ್.ಮತ್ತ್ಯಾಕೆ ಬೇಕು ಅವಳಿಗೆ ಬೇರೆ ಗಿಫ್ಟ್❓
ತಾಯಂದಿರ ದಿನ ಅನ್ನುವುದು One Day Show
ಆಗಲಾರದೇನೇ ಪ್ರತಿವರ್ಷ ಪ್ರತಿದಿನ ಮಾಡುವ ನಿತ್ಯ ನೂತನ ಹಬ್ಬವಾಗಲಿ.ಎಲ್ಲಾ ತಾಯಂದಿರಿಗೂ ಶುಭಾಶಯಗಳು.
ಸೆಲ್ಫಿ ಬೇಡ ತಾಯಿಗೊಂದು ಕುಲ್ಫಿ ಕೊಡಿಸಿ….
ಹೆತ್ತು ಹೊತ್ತ ಜೀವದ ಹೃದಯ ತಂಪಾಗಿರಲಿ….

ಚಂದ್ರಶೇಖರ್ ಅಳಗೋಡಿ (ಯುವಕವಿ) ಬೆಳಗಾವಿ

Leave a Reply

Your email address will not be published. Required fields are marked *