ಕೆಜಿಎಫ್ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಉದ್ಘಾಟನೆ

ಕೆಜಿಎಫ್ ಪೊಲೀಸ್ ಜಿಲ್ಲೆಯ ೨೦೨೨ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಬುಧವಾರ ದಿನಾಂಕ ೧೬.೧೧.೨೦೨೨ ದಂದು ಉದ್ಘಾಟನೆ ಮಾಡಲಾಯಿತು. ಕೆಜಿಎಫ್‌ನ ಚಾಂಫೀಯನ್ರೀಫ್ಸ್ನಲ್ಲಿನ ಡಿ.ಎ.ಆರ್. ಪೊಲೀಸ್ ಕವಾಯಿತು ಮೈದಾನದಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ವಾರ್ಷಿಕ ಪೊಲೀಸ್ ಕ್ರೀಡಾಕೂಟವನ್ನು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾಧಿಕಾರಿಗಳಾದ ಶ್ರೀ. ವೆಂಕಟರಾಜ್, ಐ.ಎ.ಎಸ್., ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪಾರಿವಾಳಗಳನ್ನು ಹಾಗೂ ವರ್ಣರಂಜಿತ ಬಲೂನ್ಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪೊಲೀಸರು ಕಾನೂನು ಸುವ್ಯವಸ್ಥೆ ಅಡಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಮಧ್ಯೆ ಮನೋವಿಕಾಸಕ್ಕಾಗಿ ವರ್ಷಕ್ಕೊಮ್ಮೆ ಕ್ರೀಡಾಕೂಟವನ್ನು ನಡೆಸುತ್ತಿದ್ದು, ಕೆಜಿಎಫ್‌ನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು, ಸಕ್ರಿಯವಾಗಿ ಕ್ರೀಡಾಸಕ್ತಿ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕ್ರೀಡಾಕೂಟಕ್ಕೆ ಪೊಲೀಸ್ ಅಧೀಕ್ಷಕರಾದ ಡಾ. ಕೆ.ಧರಣೀದೇವಿ, ಐ.ಪಿ.ಎಸ್. ಅವರು ಅಧ್ಯಕ್ಷತೆ ವಹಿಸಿದ್ದು, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೊಲೀಸರ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದ್ದರು. ೧೦೦ ಮೀಟರ್ ಓಟದ ಸ್ಪರ್ಧೆಗೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ. ವೆಂಕಟರಾಜ್, ಐ.ಎ.ಎಸ್. ಅವರು ಚಾಲನೆ ನೀಡಿದರು. ಡಿವೈಎಸ್ಪಿ ವಿ. ಎಲ್. ರಮೇಶ್ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಇಲಾಖಾಧಿಕಾರಿಗಳು, ಪತ್ರಕರ್ತರು, ಗಣ್ಯರು ಭಾಗವಹಿಸಿದ್ದರು.

ಕ್ರೀಡಾಕೂಟದ ಜ್ಯೋತಿಯನ್ನು ಸಿಪಿಸಿ ಶ್ರೀನಾಥ ಅವರು ಹೊತ್ತು ಆಕರ್ಷಕ ರೀತಿಯಲ್ಲಿ ಸಂಚರಿಸಿದರು. ಕ್ರೀಡಾಕೂಟದಲ್ಲಿ ಆರ್.ಪಿ.ಐ. ವಿ.ಸೋಮಶೇಖರ ಅವರ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ ಪಥಸಂಚಲನ ನಡೆಯಿತು.

Leave a Reply

Your email address will not be published. Required fields are marked *